ಕ್ಯಾಲ್ವಿನ್, ಜಾನ್
1509-1564. ಜಿನೀವದ ಪ್ರಸಿದ್ಧ ಕ್ರೈಸ್ತಮತ ಸುಧಾರಕ. ಈತ 1509ನೆಯ ಜುಲೈ 10ರಂದು ನೋಯಾನ್‍ನಲ್ಲಿ ಜನಿಸಿದ. ಇವನ ತಂದೆ ಜಿರಾರ್ಡ್ ಕಾವಿನ್ ಸೊಯಾನ್ ಚರ್ಚಿನ ವಕೀಲ. ತಾಯಿ ಜೀನ್ ಲಾ ಫ್ರಾಂಕ್ ಒಬ್ಬ ಶ್ರೀಮಂತನ ಮಗಳು. ತನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲೇ ಕಳೆದು ಕ್ಯಾಲ್ವಿನ್ ಪ್ಯಾರಿಸ್ಸಿಗೆ ಹೋಗಿ ಅಲ್ಲಿನ ಕಾಲೇಜ್ ಮಾಂಟೆಗ್ಯೂ ಎಂಬ ವಿದ್ಯಾಸಂಸ್ಥೆಯಲ್ಲಿ ಕ್ರೈಸ್ತಮತಧರ್ಮವನ್ನು ಅಭ್ಯಸಿಸಿ ಎಂ.ಎ. ಪದವೀಧರನಾದ. ಅನಂತರ ತನ್ನ ತಂದೆಯ ಆಜ್ಞಾನುಸಾರವಾಗಿ 1529 ರಿಂದ ಎರಡು ವರ್ಷಗಳ ಕಾಲ ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಿದ. 1531ರಲ್ಲಿ ತಂದೆ ತೀರಿಕೊಂಡಿದ್ದರಿಂದ ಅಧ್ಯಯನವನ್ನು ಬಿಟ್ಟು ಪ್ಯಾರಿಸ್ಸಿಗೆ ಹೋಗಿ ಅಲ್ಲಿ ಹೊಸದಾಗಿ ಹುಟ್ಟಿದ ರೆನೆಸಾನ್ಸ್ ಎಂಬ ನೂತನ ಧೋರಣೆಯಲ್ಲಿ ಆಸಕ್ತನಾದ. ಗ್ರೀಕ್, ಲ್ಯಾಟಿನ್ ಮತ್ತು ಹೀಬ್ರೂ ಭಾಷೆಗಳನ್ನು ಕಲಿತು 1532ರಲ್ಲಿ ಸೆನಕ ಎಂಬ ಪ್ರಸಿದ್ಧ ರೋಮಕನ ಡಿ ಕ್ಲೆಮೆನ್ಷಿಯ ಎಂಬ ಗ್ರಂಥದ ಮೇಲೆ ಲ್ಯಾಟಿನ್ ಭಾಷೆಯಲ್ಲಿ ಒಂದು ವ್ಯಾಖ್ಯಾನವನ್ನು ಬರೆದು ಪ್ರಕಟಿಸಿದ. ಲೂಥರನ ಅಭಿಪ್ರಾಯಗಳನ್ನೊಳಗೊಂಡ ಒಂದು ಭಾಷಣದ ಕರ್ತೃ ಇವನೆಂದು ಭಾವಿಸಿ ವಿಶ್ವವಿದ್ಯಾಲಯ ಅಧಿಕಾರಿಗಳು ಬಹಿಷ್ಕರಿಸಿದುದರಿಂದ ಈತ ಪ್ಯಾರಿಸ್ಸನ್ನು ಬಿಡಬೇಕಾಯಿತು. ಹಠಾತ್ತನೆ ಪ್ರಾಟೆಸ್ಟಂಟ್ ಮತಕ್ಕೆ ಪರಿವರ್ತನೆಗೊಂಡನಾಗಿ ಈತ ತಾನು ಪಡೆಯುತ್ತಿದ್ದ ಧರ್ಮಾದಾಯವನ್ನು ಬಿಟ್ಟುಕೊಡಬೇಕಾಯಿತು (1534). ಅದೇ ವರ್ಷ ಆಲಿವೆಟ್ಟಿ ಎಂಬಾತ ರಚಿಸಿದ್ದ ಬೈಬಲಲ್ಲಿನ ಫ್ರೆಂಚ್ ಭಾಷಾಂತರಕ್ಕೆ ಈತ ಒಂದು ಮುನ್ನುಡಿಯನ್ನು ಬರೆದನಲ್ಲದೆ ಅಲ್ಲಿಂದ ಮುಂದೆ ಸುಧಾರಿತ ಪ್ರಾಟಿಸ್ಟಂಟ್ ಪಕ್ಷಕ್ಕೆ ಮುಖಂಡನಾದ. ಈ ಪಂಥ ಲೂಥರನ ಪ್ರಾಟಿಸ್ಟಂಟ್ ಮತಸುಧಾರಣೆಯಿಂದ ಮೊದಲಲ್ಲಿ ಪ್ರೇರಿತವಾಯಿತಾದರೂ ಅನಂತರ ಅದರಿಂದ ಪ್ರತ್ಯೇಕವಾಯಿತು. ಲೂಥರನ ಮತವ್ಯವಸ್ಥೆಯ ಕೇಂದ್ರ ಜರ್ಮನಿಯಾದರೂ ಅವನ ಮತಭಾವನೆಗಳನ್ನೂ ಚರ್ಚಿನ ಆಡಳಿತ ವ್ಯವಸ್ಥೆಯನ್ನೂ ಸುಧಾರಿಸುವುದು ಅಗತ್ಯವೆಂದು ತೀವ್ರ ಚಳವಳಿ ಪ್ರಾರಂಭವಾದದ್ದು ಜಿನೀವ ಮತ್ತು ಪ್ಯಾರಿಸ್‍ಗಳಲ್ಲಿ. ಈ ಚಳವಳಿಯ ತಳಹದಿಯ ಭಾವನೆಗಳನ್ನು ವ್ಯವಸ್ಥೆಗೊಳಿಸಿದ್ದು ಕ್ಯಾಲ್ವಿನ್ನನ ಹಿರಿಯ ಕಾರ್ಯ. ತನ್ನ ಈ ಸುಧಾರಿತ ಪ್ರಾಟೆಸ್ಟಂಟ್ ಮತವನ್ನು ಇನ್ಸ್ಟಿಟ್ಯೂಟ್ಸ್ ಆಫ್ ಕ್ರಿಶ್ಚನ್ ರಿಲಿಜನ್ ಎಂಬ ಗ್ರಂಥದಲ್ಲಿ ಈತ ಪ್ರತಿಪಾದಿಸಿದ್ದಾನೆ (1536). ಈ ಗ್ರಂಥ ಹೊರಬಿದ್ದ ಕೂಡಲೇ ಇವನನ್ನು ಸುಧಾರಿತ ಮತದ ಆಚಾರ್ಯನೆಂದು ಜಿನೀವದ ಮತ್ತು ಫ್ರಾನ್ಸಿನ ಸುಧಾರಿತ ಮತದ ಚಳವಳಿಗಾರರು ಅಂಗೀಕರಿಸಿದರು. ಮೊದಲಲ್ಲಿ ಸಣ್ಣ ಗ್ರಂಥವಾಗಿದ್ದ ಇದು ಪುನರ್ಮುದ್ರಣವಾದ ಹಾಗೆಲ್ಲ ಬೆಳೆದು 1559ರ ವೇಳೆಗೆ ಒಂದು ಬೃಹತ್ ಗ್ರಂಥವಾಯಿತು. ಈ ಗ್ರಂಥ ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಡಚ್, ಜರ್ಮನ್, ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಪರಿವರ್ತಿತವಾಯಿತು.

1537ರಿಂದ ಕ್ಯಾಲ್ವಿನ್ ಜಿನೀವಾವನ್ನು ತನ್ನ ಅಧ್ಯಯನದ ಮತ್ತು ಕಾರ್ಯ ಚಟುವಟಿಕೆಯ ಕ್ಷೇತ್ರವನ್ನಾಗಿ ಮಾಡಿಕೊಂಡ. ಮೊಟ್ಟಮೊದಲಿಗೆ ಈತ ಕೈಗೊಂಡದ್ದು ವಿದ್ಯಾಭ್ಯಾಸ, ಚರ್ಚಿನ ಆಡಳಿತ ಮತ್ತು ಸಾರ್ವಜನಿಕ ನೀತಿಕ್ಷೇತ್ರಗಳ ಸುಧಾರಣೆಯನ್ನು. ಪ್ರಭುಭೋಜನದಲ್ಲಿ ಪಾಪಿಗಳಾದವರಿಗೂ ಭಾಗಿಗಳಾಗಲು ಲೂಥರ್ ಅನುಯಾಯಿಗಳು ಅವಕಾಶ ಕೊಡುತ್ತಿದ್ದರಷ್ಟೆ. ದುಷ್ಟರೆಂದು ಕುಖ್ಯಾತರಾಗಿದ್ದರೂ ರಾಜಕೀಯದಲ್ಲಿ ಗಣ್ಯರಾಗಿದ್ದ ಕೆಲವರನ್ನು ಕ್ಯಾಲ್ವಿನ್ ಪ್ರಭುಭೋಜನದಿಂದ ಹೊರದೂಡಿದ. ಅದಕ್ಕಾಗಿ ರಾಜಕಾರಣಿಗಳು ಇವನನ್ನು ಗಡೀಪಾರು ಮಾಡಿದರು. ಆಗ ಈತ ಮೂರು ವರ್ಷಗಳ ಕಾಲ ಸ್ಟ್ರಾಸ್ ಬರ್ಗಿನಲ್ಲಿ ನೆಲಸಬೇಕಾಯಿತು. ಈ ಕಾಲದಲ್ಲಿ ಈತ ಬೈಬಲ್ಲಿನ ಕೆಲವು ಭಾಗಗಳ ಮೇಲೆ ವ್ಯಾಖ್ಯಾನ ಬರೆದ. ಫ್ರೆಂಚ್ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿ ಅವರ ಮತಬೋಧಕನಾದ. 1540ರಲ್ಲಿ ಐಡಿಲೆಟ್ ಡಿ ಬ್ಯೂರಿ ಎಂಬಾಕೆಯನ್ನು ಮದುವೆಯಾದ. ಈಕೆ ತನ್ನ ಕೊನೆಗಾಲದ ವರೆಗೂ (1549) ಇವನ ಮೆಚ್ಚಿನ ಸಂಗಾತಿಯಾಗಿ ಇವನ ಕಾರ್ಯಗಳಲ್ಲಿ ಸಹಕರಿಸಿದಳು.

1541ರಲ್ಲಿ ಜಿನೀವಾದ ಅಧಿಕಾರಿಗಳ ಬೇಡಿಕೆಯನ್ನು ಅಂಗೀಕರಿಸಿ ಕ್ಯಾಲ್ವಿನ್ ಜಿನೀವಾಕ್ಕೆ ಹಿಂದಿರುಗಿ ತಾನು ರೂಪಿಸಿಕೊಂಡಿದ್ದ ಚರ್ಚಿನ ಆಡಳಿತ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತಂದ. ಈ ಹೊಸ ಆಡಳಿತ ವ್ಯವಸ್ಥೆಯೇ ಪ್ರೆಸ್ಬಿಟೇರಿಯನ್ ಪಂಥ ಎಂದು ಯೂರೋಪಿನಲ್ಲೆಲ್ಲ ಪ್ರಸಿದ್ಧವಾಯಿತು. ಕ್ಯಾಲ್ವಿನ್ ಹದಿನಾಲ್ಕು ವರ್ಷಗಳಕಾಲ ಬರೆವಣಿಗೆ, ಬೋಧನೆ ಮತ್ತು ಕ್ರೈಸ್ತ ಸಮಾಜ ಸುಧಾರಣೆಯ ಕೆಲಸಗಳಲ್ಲಿ ವಿರಾಮವಿಲ್ಲದೆ ಶ್ರಮಿಸಿದ. ಒಂದು ವರ್ಷದಲ್ಲಿ ಈತ ಸರಾಸರಿ ಫ್ರೆಂಚ್‍ನಲ್ಲಿ 249, ಲ್ಯಾಟಿನ್‍ನಲ್ಲಿ 189 ಉಪದೇಶಭಾಷಣಗಳನ್ನು ಮಾಡುತ್ತಿದ್ದ. ಈತ ನಡೆಸಿದ ಪತ್ರವ್ಯವಹಾರ ಹತ್ತು ಸಂಪುಟಗಳನ್ನು ತುಂಬಿವೆ. ಇಂಥ ಅದ್ಭುತ ಚಟುವಟಿಕೆಯಿಂದ ಬಹು ಸೋತುಹೋಗಿ ಈತ 1564ನೆಯ ಮೇ 27ರಂದು ದೈವಾಧೀನನಾದ.

ಕ್ಯಾಲ್ವಿನ್ ಸಿದ್ಧಾಂತ

ಬೈಬಲ್ಲಿನಲ್ಲಿಲ್ಲದ ಹೊಸದೇನನ್ನೂ ಕ್ಯಾಲ್ವಿನ್ನನ ಸಿದ್ಧಾಂತ ಹೇಳುವುದಿಲ್ಲ. ಕ್ರೈಸ್ತಮತ ಆಚರಣೆಯಲ್ಲಿ ಬಂದು ಸೇರಿಕೊಂಡಿದ್ದ ಕುರುಡು ಭಾವನೆಗಳನ್ನೂ ಸರ್ವಾಧಿಕಾರಿಯಾದ ಪೋಪ್ ಅನುಸರಿಸುತ್ತಿದ್ದ ದುರ್ನೀತಿಯನ್ನೂ ತೊಡೆದುಹಾಕಿ ಕ್ರೈಸ್ತಮತವನ್ನು ಶುದ್ಧೀಕರಿಸುವುದೇ ಕ್ಯಾಲ್ವಿನ್ನನ ಮುಖ್ಯ ಉದ್ದೇಶವಾಗಿತ್ತು. ಇವನ ಮುಖ್ಯ ಮತತತ್ತ್ವಗಳು ಇವು: ಮಾನವ ವಿಮೋಚನೆಗೆ ಅರ್ಹನಲ್ಲದಿದ್ದರೂ ದೇವರು ಕರುಣಿಸಿ ಕೃಪೆಯಿಂದ ಅವನಿಗೆ ವಿಮೋಚನೆಯನ್ನು ದಯಪಾಲಿಸುತ್ತಾನೆ. ವಿಮೋಚನೆಯಾಗಬೇಕಾದವ ಇಂಥಿಂಥವನೇ ಎಂಬುದು ಭಗವಂತನ ಪೂರ್ವ ಸಂಕಲ್ಪದಂತೆ ಇತ್ಯರ್ಥವಾಗುತ್ತದೆ. ಒಬ್ಬನಲ್ಲಿ ಭಕ್ತಿ ಹುಟ್ಟಿದಾಗ ಅವನು ಆ ಭಕ್ತಿ ಭಗವಂತನ ಕೊಡುಗೆ ಎಂದು ಭಾವಿಸಬೇಕೇ ವಿನಾ ಸ್ವಯಾರ್ಜಿತ ಎಂದು ಹೆಮ್ಮೆಪಡಕೂಡದು. ಈ ಪೂರ್ವಸಂಕಲ್ಪತತ್ತ್ವ ಮಾನವನ ಸ್ವಾತಂತ್ರ್ಯವನ್ನಾಗಲಿ ಪ್ರಕೃತಿಯ ನಿಯಮಗಳನ್ನಾಗಲಿ ನಿರಾಕರಿಸುವುದಿಲ್ಲ. ಮಾನವ ಸ್ವತಂತ್ರ; ಆದರೆ ಆ ಸ್ವಾತಂತ್ರ್ಯವನ್ನು ಆತ ಪ್ರಭುವಿನ ಪೂರ್ವಸಂಕಲ್ಪದಿಂದ ಪಡೆದದ್ದು. ಪ್ರಕೃತಿಯ ನೀತಿನಿಯಮವೂ ದೇವರ ಸಂಕಲ್ಪ. ಮಾನವ ಸ್ವಾತಂತ್ರ್ಯ, ಪ್ರಕೃತಿಯ ನಿಯತಿ-ಇವು ಮೂಲ ಅಥವಾ ಪ್ರಧಾನ ಕಾರಣಗಳಲ್ಲ; ಇವು ಪ್ರಭುವಿನ ಸಂಕಲ್ಪವಾದ ಪ್ರಥಮ ಕಾರಣದಿಂದ ಇಳಿದುಬಂದುವು. ಪ್ರತಿಯೊಂದು ಮಳೆಯ ಹನಿಯಲ್ಲೂ ಮಾನವನ ಪ್ರತಿಯೊಂದು ಆಲೋಚನೆಯಲ್ಲೂ ಸಂಕಲ್ಪದಲ್ಲೂ ದೇವರು ಕಾಣಿಸಿಕೊಳ್ಳುತ್ತಾನೆ. ಆದುದರಿಂದ, ಪಡೆದ ಪಾಪದಿಂದ ಮಾನವರನ್ನು ವಿಮೋಚನೆ ಮಾಡಲು ಮಾನವರ ಪಾಪದ ವಿಷವನ್ನು ನುಂಗಿ, ತನ್ನ ಪರಿಪೂರ್ಣ ಜೀವನದ ಆದರ್ಶದಿಂದ ಮಾನವರಲ್ಲಿ ಸದ್ಭಕ್ತಿಯನ್ನೂ ಸೌಶೀಲ್ಯವನ್ನೂ ಹುಟ್ಟಿಸಿ ಅವರಿಗೆ ಬಿಡುಗಡೆಯ ದಾರಿಯನ್ನು ತೋರಿಸಲು ಸ್ವರ್ಗದಲ್ಲಿರುವ ಪ್ರಭು ತನ್ನ ಮಗನಾದ ಯೇಸುಕ್ರಿಸ್ತನನ್ನು ಕಳುಹಿಸಿದ. ಭಕ್ತಿ ಪವಿತ್ರಾತ್ಮನ ಮುಖ್ಯ ಕೊಡುಗೆ. ಅದರ ಮೂಲಕ ಮಾನವಲ್ಲಿ ಪಶ್ಚಾತ್ತಾಪ ಹುಟ್ಟಿ ಅವರ ಅಂತಃಕರಣ ಪವಿತ್ರಾತ್ಮನ ಕಡೆಗೆ ಹರಿಯುತ್ತದೆ: ಯೇಸುವಿನ ಬೋಧೆಯಲ್ಲಿ ಅವರ ಮನಸ್ಸು ಲೀನವಾಗುತ್ತದೆ. ಹಾಗೆ ಲೀನವಾದಾಗ ಯೇಸುವಿನಲ್ಲಿ ಪವಿತ್ರಾತ್ಮ ಸಾಕ್ಷೀರೂಪನಾಗಿದ್ದು ಆ ಮಾನವ ಪಾಪದಿಂದ ಮುಕ್ತನೆಂದು ಆಶ್ವಾಸನೆ ನೀಡುತ್ತಾನೆ, ರುಜುವಾತು ಕೊಡುತ್ತಾನೆ. ಈ ಸಮರ್ಥನೆಗೆ ಜಸ್ಟಿಫಿಕೇಷನ್ ಎಂದು ಹೆಸರು. ಹೀಗೆ ಹೇಳಿದಾಗ ಮಾನವನ ಸ್ವಪ್ರಯತ್ನಕ್ಕೆ ಅವಕಾಶವಿಲ್ಲವೆಂದು ತಿಳಿಯಕೂಡದು. ಮಾನವನ ಯತ್ನ ಮತ್ತು ಪವಿತ್ರಾತ್ಮನ ಕೃಪೆ ಇವೆರಡನ್ನೂ ಸ್ಪಷ್ಟವಾಗಿ ಗುರುತಿಸಬಹುದಾದರೂ ಅವೆರಡೂ ಅವಿಭಾಜ್ಯ. ಭಗವಂತ ಆಯ್ದವರು ಯೇಸುವಿನ ಸಂದೇಶದಿಂದ ಪ್ರೇರಿತರಾಗಿ ತಮ್ಮ ಸದ್ವರ್ತನೆಯ ಮೂಲಕ ಧಾರ್ಮಿಕ ಜೀವನದಲ್ಲಿ ಮುಂದುವರಿದಾಗ ತಾವು ಪಾಪದಿಂದ ವಿಮುಕ್ತರಾದೆವೆಂಬ ಸಮರ್ಥನೆ ಅವರಿಗೆ ದೊರೆಯುತ್ತದೆ. ಭಕ್ತಿ ಅಂತರಂಗಕ್ಕೆ ಸಂಬಂಧಿಸಿದ ಸಹಕಾರಿ; ಕ್ರೈಸ್ತಧರ್ಮ ಸಂಸ್ಥೆಯಾದ ಚರ್ಚ್ ಮತ್ತು ಅದರ ಸಂಸ್ಕಾರಗಳು ಬಾಹ್ಯಸಹಕಾರಿಗಳು. ಇವುಗಳ ಮೂಲಕ ಪವಿತ್ರಾತ್ಮ ಯೇಸುವಿನಲ್ಲಿ ಏಕೀಭವಿಸುವಂತೆ ಮಾನವರನ್ನು ಪ್ರೇರಿಸುತ್ತಾನೆ. ಕ್ರೈಸ್ತಧರ್ಮಸಂಸ್ಥೆಯ ಧರ್ಮದರ್ಶಿಗಳು ಪವಿತ್ರಾತ್ಮನಿಂದ ಆಯವರು. ಇವರಲ್ಲಿ ಮೂರು ಬಗೆಯವರಿರುತ್ತಾರೆ: ಚರ್ಚಿನ ಉಪದೇಶಕರು ಮತ್ತು ಸಂಸ್ಕಾರಗಳಲ್ಲಿ ಪೌರೋಹಿತ್ಯವಹಿಸುವವರು; ಕ್ರೈಸ್ತ ಧರ್ಮೋಪನ್ಯಾಸಕರು ಮತ್ತು ಉಪಾಧ್ಯಾಯರು; ಮೇಲ್ವಿಚಾರಣೆಗಾಗಿ ಭಕ್ತಮಂಡಲಿಯಿಂದ ಆಯ್ಕೆಯಾದ ಹಿರಿಯರು ಮತ್ತು ಡೀಕನ್ ಎಂಬ ಲೌಕಿಕ ವಿಚಾರದ ಅಧಿಕಾರಿ. ಸಂಸ್ಕಾರಗಳು ಎರಡು-ದೀಕ್ಷಾಸ್ನಾನ (ಬ್ಯಾಪ್ಟಿಸಮ್) ಮತ್ತು ಪ್ರಭುಭೋಜನ (ಕಮ್ಯೂನಿಯನ್). ದೀಕ್ಷಾಸ್ನಾನದ ಮೂಲಕ ವ್ಯಕ್ತಿ ಕ್ರೈಸ್ತಸಂಘದ ಸದಸ್ಯನಾಗುತ್ತಾನೆ. ಪ್ರಭುಭೋಜನದಲ್ಲಿ ಅಂದರೆ ಯೇಸುವಿನ ದೇಹ ಮತ್ತು ರಕ್ತಸಂಕೇತಗಳಾದ ರೊಟ್ಟಿ ಮತ್ತು ಮದ್ಯವನ್ನು ಸೇವಿಸುವುದರ ಮೂಲಕ ವ್ಯಕ್ತಿ ಯೇಸುವಿನ ರಕ್ತಸಂಬಂಧಿಯಾಗುತ್ತಾನೆ. ಕಾಲದೇಶಗಳಲ್ಲಿ ಭಿನ್ನರಾದವರು ಆತ್ಮದಲ್ಲಿ ಒಂದಾಗುತ್ತಾರೆ. ಕ್ಯಾಲ್ವಿನ್ನನ ಬೃಹತ್‍ಗ್ರಂಥದ ನಾಲ್ಕನೆಯ ಅಧ್ಯಾಯದ ಕೊನೆಯಲ್ಲಿ ಕ್ರೈಸ್ತ ಧರ್ಮಸಂಸ್ಥೆಯ ಆಡಳಿತದಲ್ಲಿ ಕಾಲೋಚಿತವಾಗಿ ಆಗಬೇಕಾದ ಬದಲಾವಣೆಗಳ ವಿವರಗಳಿವೆ. ಕ್ಯಾಲ್ವಿನ್ ಸಾಮಾನ್ಯರ ಪ್ರತಿನಿಧಿಸರ್ಕಾರವನ್ನು ಎತ್ತಿ ಹಿಡಿದಿರುತ್ತಾನಾದರೂ ಜನ ಸಾಮಾನ್ಯರ ಅಚಾತುರ್ಯವನ್ನು ತಡೆಗಟ್ಟಲು ಆಡಳಿತವರ್ಗದಲ್ಲಿ ಮೇಲ್ವರ್ಗದ ಪ್ರತಿನಿಧಿಗಳು ಇರುವುದು ಅಗತ್ಯವೆಂದು ಸೂಚಿಸಿರುತ್ತಾನೆ.

ಕ್ಯಾಲ್ವಿನ್ನನ ಮರಣಾನಂತರ ಆತ ರೂಪಿಸಿದ ಮತಧರ್ಮ ಕ್ಯಾಲ್ವಿನಿಸಮ್ ಎಂಬ ಒಂದು ಪಂಥವಾಗಿ ಬೆಳೆಯಿತು. ಅತ ರೂಪಿಸಿದ ಚರ್ಚಿನ ಆಡಳಿತವೇ ಪ್ರೆಸ್ಟಿಟೇರಿಯನ್ ಪಂಥ (ನೋಡಿ- ಪ್ರೆಸ್ಟಿಟೇರಿಯನ್-ಪಂಥ) ಎಂಬ ಹೆಸರು ಪಡೆದು ಹಾಲೆಂಡ್, ಜರ್ಮನಿ, ಫ್ರಾನ್ಸ್, ಸ್ಕಾಟ್ಲೆಂಡ್ ಮತ್ತು ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಅಂಗೀಕೃತವಾಯಿತು. 	 (ಜಿ.ಎಚ್.; ಎಂ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ